ಮೀಸಲಿಡಿಕೆ - 
ದೇವರ ಹೆಸರಿನಲ್ಲಿ (ಪವಿತ್ರವಾದ ಬಳಕೆಗಾಗಿ) ಒಂದು ವಸ್ತು. ಸ್ಥಳ ಇಲ್ಲವೆ ವ್ಯಕ್ತಿಯನ್ನು ಪ್ರತ್ಯೇಕಿಸಿಡುವ ಒಂದು ಸಂಪ್ರದಾಯ (ಕಾನ್ಸಿಕ್ರೇಷನ್). ಇದು ಎಲ್ಲ ಧರ್ಮದ ಜನರಲ್ಲಿಯೂ ಕಂಡುಬರುತ್ತದೆ. ಯೆಹೂದ್ಯರಲ್ಲಿ ಬಹಳ ಹಿಂದಿನಿಂದ ಇದ್ದ ಈ ಪದ್ಧತಿ ಕ್ರೈಸ್ತರಲ್ಲೂ ಮುಂದುವರಿದಿದೆ.

	ಯಾವುದಾದರೊಂದು ವಸ್ತು, ಸ್ಥಳ, ವ್ಯಕ್ತಿ ದೇವರಿಗೆ ಮೀಸಲೆಂದು ಅದರ ಮೇಲೆ ಎಣ್ಣೆ ಹೊಯ್ದು, ಕೈ ಇಟ್ಟು, ಧರ್ಮಚಿಹ್ನೆ ಒತ್ತಿ, ಉಸಿರು ಊದಿ, ಇಲ್ಲವೇ ದೇವವಾಕ್ಯ (ಮಂತ್ರ) ಪಠಿಸಿ ಸೂಚಿಸಬಹುದು. ಈ ಕಾರ್ಯಕ್ಕಾಗಿ ಯೆಹೂದ್ಯರು ಎಣ್ಣೆಯನ್ನು ಬಳಸುತ್ತಿದ್ದರು. ಅರಸನನ್ನು ನೇಮಿಸುವಾಗ ಪ್ರವಾದಿಗಳನ್ನು ಅಂಗೀಕರಿಸುವಾಗ ಯಾಜಕರನ್ನು ಪ್ರತಿಷ್ಠಿಸುವಾಗ ಎಣ್ಣೆಯಿಂದ ಅಭಿಷೇಕ ಮಾಡುವುದು ಅವರಲ್ಲಿ ರೂಢಿಯಲ್ಲಿತ್ತು. ಹೀಗೆ ಅಭಿಸಿಕ್ತರಾದವರನ್ನು ಜನರು ದೇವರಿಂದ ನೇಮಕವಾಗಿ ನಿಯತಕಾರ್ಯವನ್ನು ಮಾಡಲು ಮೀಸಲು ಆದವರು ಎಂದು ಭಾವಿಸುತ್ತಿದ್ದರು.

	ಯೇಸುಕ್ರಿಸ್ತನ ಕಾಲದಲ್ಲಿ ಈ ಪದ್ಧತಿ ರೂಢಿಯಲ್ಲಿದ್ದಿತಾದರೂ ಅವನು ಅದನ್ನು ಬಳಸಿದಂತೆ ಕಾಣುವುದಿಲ್ಲ. ಆತನೂ ದೇವರಿಂದ ಅಭಿಷಿಕ್ತನೇ; ದೈವ ಪಾರಿವಾಳ ರೂಪದಲ್ಲಿ ಅವನ ಮೇಲೆ ಇಳಿದದ್ದು, ಆ ಕಾಲದಲ್ಲಿ ಕೇಳಿದ ದೈವವಾಣಿ ಅವನು ಅಭಿಷಿಕ್ತನೆಂಬುದಕ್ಕೆ ಸಾಕ್ಷಿ. ಆತ ತನ್ನ ಶಿಷ್ಯರನ್ನು ತನ್ನ ಸಂದೇಶದ ರಾಯಭಾರಿಗಳಾಗಿ ನೇಮಿಸಿದಾಗ ಅವರ ಮೇಲೆ ಊದಿ ಅವರಿಗೆ ಪವಿತ್ರಾತ್ಮ ವರವನ್ನು ತಕ್ಕೊಳ್ಳಿರಿ ಎಂದು ಹೇಳಿದ. ಕ್ರೈಸ್ತಸಭೆಯ ಕೆಲವೆಡೆಗಳಲ್ಲಿ ತೈಲಾಭಿಷೇಕ ಮಾಡುವುದುಂಟು. ಸಭಾಹಿರಿಯರ ದೀಕ್ಷೆಯ ಕಾಲಕ್ಕೆ ಅವರ ತಲೆಯ ಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡುವ ಪದ್ಧತಿಯಿದೆ. ದೇವಾಲಯವನ್ನೂ ಅದರಲ್ಲಿರುವ ವಸ್ತುಗಳನ್ನೂ ಪ್ರಾರ್ಥನೆಯ ಮೂಲಕ ಪ್ರತಿಷ್ಠಿಸುವುದುಂಟು. ಹೀಗೆ ಪ್ರತಿಷ್ಠಿತವಾದ ವಸ್ತುಗಳು ಮತ್ತು ಸ್ಥಳಗಳು ಸಾಮಾನ್ಯ ಬಳಕೆಗೆ ಉಪಯೋಗಿಸಲ್ಪಡುವುದಿಲ್ಲ. ಸ್ನಾನದೀಕ್ಷೆ ಹೊಂದಿದವರ ಹಣೆಯ ಮೇಲೆ ಶಿಲುಬೆಚಿಹ್ನೆಯನ್ನು ಮೂಡಿಸುವುದೂ ಉಂಟು. 		(ಎಸ್.ಎ.ಎಂ.ಎ.)

	ದೇವತಾಕಾರ್ಯಕ್ಕಾಗಿ ಬಳಸುವ ಎಲ್ಲ ವಸ್ತುಗಳನ್ನೂ ಮೀಸಲು ಎಂದೆಣಿಸುವ ಕಲ್ಪನೆ ಹಿಂದೂಗಳಲ್ಲೂ ಉಂಟು. ದೇವರಿಗೆ ಮೀಸಲಾದ ನೀರನ್ನು ಬೆರಳದ್ದಿ ಕೆಡಿಸಬಾರದು. ದೇವರಿಗೆ ಮೀಸಲಾದ ಹೂವನ್ನು ಚಿವುಟುವುದಾಗಲೀ ಮೂಸುವುದಾಗಲೀ ನಿಷಿದ್ಧ. ಸ್ನಾನಾದಿಗಳಿಂದ ಶುಚಿರ್ಭೂತರಾಗದೆ ದೇವಗೃಹವನ್ನು ಪ್ರವೇಶಿಸಬಾರದು. ದೇವರಿಗೆ ಅರ್ಪಿಸಬೇಕಾದುದನ್ನು ಅರ್ಪಣೆಗೆ ಮೊದಲು ರುಚಿನೋಡಬಾರದು ಎಂಬ ನಿಯಮವೂ ಇದೆ. ಅಲ್ಲದೆ ಸಂನ್ಯಾಸಪಟ್ಟಕೊಡುವ ಸಂದರ್ಭದಲ್ಲಿ ಆಯ್ಕೆಯಾದ ವ್ಯಕ್ತಿಯಿಂದ ಸಂಕಲ್ಪ ಹೇಳಿಸಿ. ತರಬೇತಿ ನೀಡಿ ಈ ಬಗೆಯ ಮೀಸಲಿಡಿಕೆಯ ಅನಂತರ ದೀಕ್ಷೆ ಕೊಡಲಾಗುತ್ತದೆ. ದೇವರಿಗೆ ಕೊಡುವ ಕಾಣಿಕೆಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಮುಡುಪಾಗಿರಿಸುವುದು ಸಾಮಾನ್ಯ ಪದ್ಧತಿ. ಹಣ್ಣುಗಳನ್ನು ದೇವರಿಗೆ ಮೀಸಲು ಬಿಡುವ ಪದ್ಧತಿ ಕೂಡ ಕೆಲವೆಡೆಗಳಲ್ಲಿದೆ. ಕರ್ನಾಟಕದಲ್ಲಿ ಕಂಡುಬರುವ ಜೋಗಿತಿ ಸಂಪ್ರದಾಯ ಅಂಥ ಆಚರಣೆಗಳಲ್ಲೊಂದು. 			(ನೋಡಿ- ಜೋಗಿತಿ-ಸಂಪ್ರದಾಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ